ಭೀಮಾ ಶಿಲಾಶ್ರೇಣಿ	 - 
 	ಕರ್ನಾಟಕ ರಾಜ್ಯದ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ, ಕೃಷ್ಣಾನದಿಯ ಉಪನದಿಯಾದ ಭೀಮಾನದಿಯ ಪಾತ್ರದಲ್ಲಿ ಸುಮಾರು 3218.66 ಚಕಮೀ ಪ್ರದೇಶದಲ್ಲಿ ವ್ಯಾಪಿಸಿರುವ ಶಿಲಾಶ್ರೇಣಿ. ಇಲ್ಲಿಯ ಶಿಲೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಮರಳು ಮತ್ತು ಜೇಡುಶಿಲೆಗಳಿಂದ ಕೂಡಿರುವ ಕೆಳಗಿನ ಸ್ತರ, ಸುಣ್ಣ ಶಿಲೆಗಳಿಂದ ಕೂಡಿರುವ ಮಧ್ಯ ಮತ್ತು ಮೇಲು ಭಾಗದ ಸ್ತರ. ಭೀಮಾ ಶಿಲೆಗಳು ಸಮತಲವಾಗಿ ಹಬ್ಬಿವೆ. ಭೀಮಾ ಮತ್ತು ಕರ್ನೂಲ್ ಶಿಲೆಗಳು ಸಮಕಾಲೀನವೆನ್ನಲಾಗಿದೆ.

	ಭೀಮಾವರ್ಗಕ್ಕೆ ಸೇರಿರುವ ಸುಣ್ಣ ಶಿಲೆಗಳು ಪದರ ಪದರಗಳಾಗಿ ಬಿಟ್ಟುಕೊಳ್ಳುತ್ತವೆ. ಗುಲ್ಬರ್ಗ ಜಿಲ್ಲೆಯ ವಾಡಿ, ಚಿತ್ತಾಪುರ, ಚಿಂಚೋಳಿ, ಸೇದಮ್ ಈ ಸ್ಥಳಗಳಲ್ಲಿ ವಿಶೇಷವಾಗಿ ಈ ಕಲ್ಲುಗಳನ್ನು ಚದುರಾಕಾರದ ಬಿಲ್ಲೆಗಳ ರೂಪದಲ್ಲಿ ಕತ್ತರಿಸಿ ಮಾರಾಟ ಮಾಡುತ್ತಾರೆ. ತಿಳಿ ನೀಲಿ ಬಣ್ಣದ ಈ ಕಲ್ಲುಗಳು ಷಹಬಾದ್ ಕಲ್ಲುಗಳೆಂದೇ ಪ್ರಸಿದ್ಥವಾಗಿವೆ.

	ಭೀಮಾ ಶಿಲಾ ಸಮುದಾಯಕ್ಕೆ ಸೇರಿರುವ ಸುಣ್ಣ ಕಲ್ಲುಗಳು ಸಿಮೆಂಟ್ ತಯಾರಿಕೆಗೆ ಅತ್ಯಂತ ಉಪಯುಕ್ತವೆನಿಸಿವೆ. ಆ ಕಾರಣದಿಂದ ಪ್ರಮುಖ ಸಿಮೆಂಟ್ ಕಾರ್ಖಾನೆಗಳು ಗುಲ್ಬರ್ಗ ಜಿಲ್ಲೆಯ ಷಹಬಾದ್, ವಾಡಿ, ಸೇದಮಗಳ ಬಳಿ ಸ್ಥಾಪನೆಯಾಗಿವೆ. ಬಿಜಾಪುರ ಜಿಲ್ಲೆಯ ತಾಳಿಕೋಟೆ ಬಳಿಯೂ ಈ ಶಿಲೆಗಳು ಕಾಣಬರುತ್ತವೆ. 				
(ಎಂ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ